Pages

Monday, October 6, 2008

"1700 11th AVE NE ಅಪಾರ್ಟ್ ಮೆಂಟ್ - 6"


         
          ಇದೇನಿದು ಅರ್ಥವಾಗದ ವಿಷಯವೆಂದು ತಲೆಕೆಡಿಸಿಕೊಳ್ಳಬೇಡಿ. ಹಾ! ಇದು ನಾನು ನನ್ನ ಸಹೋದ್ಯೋಗಿಗಳೊಂದಿಗೆ ದೂರದ ಅಮೇರಿಕಾ ದೇಶದಲ್ಲಿ ತಂಗಿದ್ದ ಮನೆಯ ವಿಳಾಸ. ವರುಷದ ಬಹು ಭಾಗ ಮಂಜು ಕವಿದು, ನಿಶಬ್ದ, ನಿಶ್ಕಲ್ಮಶ ವಾತಾವರಣವಿರುವ ದಕ್ಷಿಣ ಅಮೇರಿಕಾದ ಒಂದು ಸಣ್ಣ ಪಟ್ಟಣ. ಅದೇಕೊ ಈ ಅಪಾರ್ಟ್ ಮೆಂಟುಗೂ ನಮಗೂ ಅಭಿನಾಭಾವ ಸಂಬಂಧ. ಸುಮಾರು ಒಂದು ವರುಷಗಳ ಕಾಲ ನನ್ನ ಸಹೋದ್ಯೋಗಿಗಳು ಈ ಮನೆಗೆ ಒಬ್ಬರಾದ ನಂತರ ಒಬ್ಬರಂತೆ ಸರದಿ ರೂಪದಲ್ಲಿ ಬಂದು ಹೋಗುತ್ತಿದರು. ಮೊನ್ನೆ ಮನಸ್ಸಿಲ್ಲದ ಮನಸ್ಸಿನಿಂದ ನನ್ನ ಎಲ್ಲಾ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಮನೆಯನ್ನು ತೆರವುಗೊಳಿಸಿದೆ.
          ಈ ಆಧುನಿಕ ಗಣಕಯಂತ್ರ ಯುಗದಲ್ಲಿ ವಿದೇಶ ಪ್ರಯಾಣ ತುಂಬಾ ಮಾಮುಲು ಆಗಿ ಬಿಟ್ಟಿದೆ. ತಮ್ಮ ಭವಿಷ್ಯದ ದ್ರಿಷ್ಟಿಯಿಂದ ಅನ್ ಸೈಟ್ ಬಹಳ ಪ್ರಾಮುಖ್ಯ ಎಂದು ಅಪನಂಬಿಕೆ ಹೊಂದಿದ್ದ ಯುವಜನಾಂಗದಲ್ಲಿ ನಾನು ಒಬ್ಬ ಎಂದು ಹೇಳಲು ತುಂಬಾ ವಿಷಾದವಾಗುತ್ತದೆ. ಹೀಗೆ ಹತ್ತು ಹಲವು ಕನಸು, ಕಲ್ಪನೆ ಹೊತ್ತು ನನ್ನ ಸಹೋದ್ಯೋಗಿಯೊಂದಿಗೆ ಕನಸಿನ ಪ್ರಯಾಣ ಬೆಳೆಸಿದ್ದೆ. ಲೋಹದ ಹಕ್ಕಿಯ ತೆಕ್ಕೆಯಿಂದ ಇಳಿಯುತ್ತಿದ್ದಂತೆ, ನಮ್ಮನ್ನೆ ಕಾಯುತ್ತಿದ್ದ ಹವಾ ನಿಯಂತ್ರಿತ ಕಾರು ನಮ್ಮನ್ನು ಈ ಅಪಾರ್ಟ್ ಮೆಂಟ್ - 6 ಗೆ ತಲುಪಿಸಿತು. ಹೊಸ ಮದುಮಗಳು ಬಲಗಾಲಿಟ್ಟು ಮನೆಯೊಳಗೆ ಬರುವಂತೆ ನಾವು ಕೂಡ ಬಲಗಾಲಿಟ್ಟೆ ಒಳನಡೆದೆವು. ಆಧುನಿಕ ಸೌಲಭ್ಯನೊಳಗೊಂಡ ವಿಶಾಲ ಹಾಗೂ ಸುಂದರವಾದ ಮನೆ ಇದಾಗಿತ್ತು. ದಿನದ 24 ಘಂಟೆ ನಿರಂತರ ವಿದ್ಯುತ್, ನೀರು, ಇಂಟರ್ ನೆಟ್ ಸೌಲಭ್ಯವಿತ್ತು. ಮಾರನೆ ದಿನದಿಂದಲೆ ನಮ್ಮ ಕಚೇರಿಯ ಕೆಲಸ ಚುರುಕುಗೊಂಡಿತು. ದಿನ ಕಳೆದಂತೆ ಮತ್ತಷ್ಟು ಸಹೋದ್ಯೋಗಿಗಳು ಈ ಮನೆಯ ಸದಸ್ಯರಾದರು. ನಿಶಬ್ದತೆಯಿಂದ ಕೂಡಿದ ಮನೆಗೆ ಕಳೆ ಬರ ತೊಡಗಿತು. ಮನೆಯಲ್ಲಿನ ಚಟುವಟಿಕೆಗಳೂ ಕೂಡ ಜಾಸ್ತಿಯಾಗತೊಡಗಿತು.
          ಆಧುನಿಕತೆ ಮುಂದುವರಿದಂತೆ ಬೆಂಗಳೂರಿನಲ್ಲಿ ಯಾರಿಗೂ ಯಾವುದಕ್ಕೂ ಸಮಯ ಸಿಗುದೆ ಅಪರೂಪವಾಗಿ ಬಿಟ್ಟಿದೆ. ದಿನದ ಮೊದಲಾರ್ದ ಕಚೇರಿಯಲ್ಲಾದರೆ ಉಳಿದಾರ್ದ BMTC ಬಸ್ಸಿನಲ್ಲಾಗುತ್ತದೆ. ಇದಕ್ಕೆ ವಿರುದ್ದ ಎಂಬಂತೆ ನಮಗೆ ಇಲ್ಲಿ ನಮ್ಮ ಇಚ್ಚೆಗೂ ಮೀರಿದಸ್ಟು ಸಮಯ ಎಲ್ಲದಕ್ಕೂ ಸಿಗುತ್ತಿತ್ತು. ಹೀಗಾಗಿ ಕಚೇರಿಯ ನಂತರದ ಚಟುವಟಿಕೆಗಳೆ ಬಹಳ ಸ್ವಾರಸ್ಯಕರವಗಿತ್ತು. ಪಶ್ಚಿಮದಲ್ಲಿ ಸೂರ್ಯಸ್ತವಾಗುತ್ತಿದಂತೆ ಅಪಾರ್ಟ್ ಮೆಂಟ್ - 6 ನಲ್ಲಿ ಸೂರ್ಯೊದಯವಾಗುತ್ತಿತ್ತು. ಒಂದು ತುದಿಯಲ್ಲಿ ಲತಾ ಮಂಗೇಶಕರ್ ಹಾಡು ಕೇಳುವವರು, ಮತ್ತೊಂದು ಕಡೆ ಬಬ್ರುವಾಹನ ಕಾಳಗ, ಕೆಲವರು ಗೆಳೆಯ ಗೆಳೆಯರೊದಿಗೆ ಚಾಟಿಂಗ್ ನಲ್ಲಿ ಮಗ್ನ, ವ್ಯೆವಾಹಿತರದು ದೂರ ಸಂಪರ್ಕದಲ್ಲಿ ಅರ್ಧಾಂಗಿ ಜೊತೆ ಸರಸ ಸಲ್ಲಾಪ, ಒಟ್ಟಿನಲ್ಲಿ ಕತ್ತಲಾಗುತ್ತಿದಂತೆ ಮಾತಾಡು ಇಂಡಿಯಾ ಮಾತಾಡು..!!.. ಇನ್ನು ಊಟ, ಕಾಫಿ ತಿಂಡಿ ವಿಷಯವಂತು ಇನ್ನಷ್ಟು ಸ್ವಾರಸ್ಯಕರವಾಗಿತ್ತು. ನಮ್ಮದು ಪುರುಷ ಪ್ರಧಾನ ಸಮಾಜ ನೋಡಿ, ಪುರುಷರಿಗೆ ಅಡಿಗೆ ಮನೆಯೆಂದರೆ ಅದೇಕೊ ಅಲರ್ಜಿ. ಮಾಡಿದ ಅಡಿಗೆಯನ್ನು ತಿಂದಷ್ಟೆ ಅಭ್ಯಾಸ ನಮಗೆ. ಕಿಸೆಯಲ್ಲಿ ಹಣವಿದ್ದರೆ ಬೆಂಗಳೂರಿನ ಯಾವ ತುದಿಗೆ ನಡು ರಾತ್ರಿ ಹೋದರು ಪೊಂಗಲ್ ಪುಳಿಯೊಗರೆಗೇನು ಕೊರತೆಯಿಲ್ಲ. ಹೀಗಾಗಿ ಮನೆಯಲ್ಲಿ ಹೆಚ್ಚಿನವರು ಬೆಂಕಿ ಹಚ್ಚುದೆ ಮರೆತು ಬಿಟ್ಟಿದ್ದಾರೆ. ಆದರೆ ಇಲ್ಲಿ ಹೊರಗಡೆ ಹೋದರೆ ದನ ತಿನ್ನುವ ಹುಲ್ಲು ತಿನ್ನ ಬೇಕೆ ಹೊರತು ಬೇರೆನು ನಮ್ಮ ದೇಹಕ್ಕೆ ಒಗ್ಗುವಂತದು ಸಿಗುವುದಿಲ್ಲ. ಹಾಗಾಗಿ ಮನೆಯಲ್ಲೆ ವಿಧ ವಿಧದ ತಿಂಡಿಗಳನ್ನು ಬಹಳ ಪ್ರಯತ್ನ ಪಟ್ಟು ಮಾಡುತ್ತಿದೆವು. ಅಡಿಗೆ ಮಾಡುದರಲ್ಲಿ ಯುವ ಪಡೆ ಗ್ರಹಸ್ಥರನ್ನು ಮೀರಿಸಿತ್ತು. ನಾವೇನು ನಳ ಭೀಮಸೇನರಿಗೆ ಕಮ್ಮಿ ಇಲ್ಲ ಎಂದು ಒಳ ಮನಸ್ಸು ಅಂದುಕೊಳ್ಳದೆ ಇರಲಿಲ್ಲ. ಅಡಿಗೆ ರೆಡಿಯಾಗುತ್ತಿದಂತೆ ಬಳ್ಳಾರಿ ಜೈಲ್ ನಲ್ಲಿ ಕೈದಿಗಳು ತಟ್ಟೆ ಹಿಡಿದು ಸಾಲು ನಿಲ್ಲುವಂತೆ, ಮ್ಯಾನೆಜರ್ ಲೀಡ್ ಎನ್ನದೆ ಎಲ್ಲರೂ ಬರುತ್ತಿದರು. ಯಾಕೆಂದರೆ 5 ನಿಮಿಷ ಕಳೆದರೆ ಪಾತ್ರೆ ಖಾಲಿಯಾಗಿ ಬಿಡುತ್ತಿತ್ತು. ಇಲ್ಲೆ ನಮಗೆ ಅನ್ನದ ನಿಜವಾದ ಮಹತ್ವ ತಿಳಿದದ್ದು. ಅನ್ನದಾತೋ ಸುಖಿನೋ ಭವಃ ಸೂಕ್ತಿಗೆ ನಿಜವಾದ ಅರ್ಥ ದೊರಕಿದ್ದು. ಇನ್ನು ವಾರಾಂತ್ಯವಾಗುತ್ತಿದಂತೆ ನಮ್ಮ ಇಚ್ಚೆಗನುಸಾರವಾಗಿ ಬೇರೆ ಬೇರೆ ತಂಡವಾಗಿ ಬೇರ್ಪಡಿಸುತ್ತಿದೆವು. ಕಂಠ ಪೂರ್ತಿ ಕುಡಿದು, ಕುಣಿದು ಕುಪ್ಪಳಿಸುವ, ವಾರದಲ್ಲಿ ಗಳಿಸಿದ ಹಣವನ್ನು ವ್ಯಯಿಸುವ ಅಮೇರಿಕ್ಕನ್ನರ ಮೊಜನ್ನು ಸಂದಿಯಲ್ಲಿ ನಿಂತು ನೋಡುವ ಒಂದು ತಂಡವಾದರೆ, ನಿದ್ರಾದೇವಿಯ ಬಿಸಿ ಅಪ್ಪುಗೆಯಲ್ಲೆ ವಾರಾಂತ್ಯ ಕಳೆಯುವ ಒಂದು ಅಪರೂಪದ ವರ್ಗ. ವಾರಕ್ಕೆ ಬೇಕಾಗುವ ಹಣ್ಣು ತರಕಾರಿ ಸಾಮಾನುಗಳನ್ನು ತರುವ ಗ್ರಹಸ್ಥ ವರ್ಗ. ಬೀರು ಕುಡಿದು ಇಸ್ಪಿಟು ಆಡಿ, ಜಗ್ಗೇಶ್ ಪಿಲ್ಮ್ ನೋಡಿ ಮಜಾ ತಗೋಳುವ ಬ್ರಹ್ಮಚಾರಿಗಳ ಒಂದು ಬ್ರಹತ್ ತಂಡ. ಒಟ್ಟಿನಲ್ಲಿ ವಾರಾಂತ್ಯ ಒಂದು ದೀಪಾವಳಿ ಹಬ್ಬದಂತೆ ಖುಷಿ ನೀಡುತ್ತಿತ್ತು.ಸತ್ಯ ಸಂಗತಿಯೆಂದರೆ ಈ ಅನ್ ಸೈಟ್ ಕೆಲಸದಿಂದ ನನ್ನ ಜ್ನಾನರ್ಜನೆಯಾಯಿತೊ ಇಲ್ಲವೊ ಗೊತ್ತಿಲ್ಲ ಆದರೆ ನನ್ನ ಸಹೋದ್ಯೊಗಿಗಳ ಮನಸ್ಥಿತಿ ತಿಳಿದುಕೊಳ್ಳುವ ಸುವರ್ಣ ಅವಕಾಶ ದೊರೆತಂತಾಗಿತ್ತು. ಕೆಲವರ ಕಂಜೂಸುತನ, ಉದ್ಢಟತನ, ಹಾಸ್ಯ, ಶ್ರಂಗಾರ, ಕುತೂಹಲಬರಿತ ಹವ್ಯಾಸಗಳು, ನಡೆದು ಬಂದ ದಾರಿ, ಜೀವನದ ಸಾಧನೆಗಳು ಹೀಗೆ ಆನೇಕ ಕೆಟ್ಟ ಹಾಗೂ ಒಳ್ಳೆಯ ಗುಣಗಳು ಕಚೇರಿಯಲ್ಲಿ ವ್ಯಕ್ತವಾಗದೆ ಇದ್ದುದು ಮನೆಯಲ್ಲಿ ಗೋಚರಿಸುತ್ತಿತ್ತು, ವ್ಯಕ್ತವಾಗುತ್ತಿತ್ತು. ಕೆಲವೊಮ್ಮೆ ನಮ್ಮೊಳಗೆ ವಾದ ವಿವಾದ, ಮಾತಿನ ಚಕಮಕಿ ನಡೆಯದೆ ಇರಲಿಲ್ಲ.
          ಹೀಗೆ ಹತ್ತು ಹಲವು ಸಿಹಿ ಕಹಿ ಘಟನೆಗಳನ್ನು ಅಂಟಿಸಿಕೊಂಡಿದ ಅಪಾರ್ಟ್ ಮೆಂಟ್ - 6 ಬಾಂಧವ್ಯ ಕೊನೆಗೂ ಮುಕ್ತಾಯವಾಗಿದೆ. ಭಾರತೀಯ ಮಸಾಲೆ ಪಧಾರ್ಥಗಳ ವಾಸನೆಯಿಂದ, ರಾಜಕುಮಾರ್ - ಲತಾಮಂಗೇಶಕರ್ ಹಾಡಿನಿಂದ, ರಜನಿ - ಉಪೇಂದ್ರ ಡ್ಯೆಲಾಗಳಿಂದ ಅಪಾರ್ಟ್ ಮೆಂಟ್ - 6 ಗೆ ಮುಕ್ತಿ ದೊರೆತಂತಾಗಿದೆ. ಹೆಂಡತಿ ಕಳಕೊಂಡ ವಿಧುರನಂತೆ ಅಪಾರ್ಟ್ ಮೆಂಟ್ - 6 ಬೀಕೊ ಎನ್ನುತ್ತಿದೆ. ಮತ್ತೊಮ್ಮೆ ಸುಸಂಸ್ಕ್ರತ ಭಾರತೀಯರ ಸ್ಪರ್ಶಕ್ಕಾಗಿ ಕಾಯುತ್ತಿದೆ.
         ಕೊನೆ ಹನಿ; ಭಾರತೀಯ ಸಂಸ್ಕ್ರತಿಯು ಮಾನವೀಯ ಮೌಲ್ಯಗಳಿಂದ ಸಂಪ್ಫದಭರಿತವಾಗಿದ್ದರು ವಿದೇಶಿಯರಿಂದ ನಾವು ಕಲಿಯುದು ಬಹಳ ಇದೆ ಎಂಬುದು ನನ್ನ ಮುಕ್ತ ಮನಸ್ಸಿನ ಅನಿಸಿಕೆ...

No comments:

Post a Comment