Pages

Saturday, September 10, 2011

ಗುಡ್ ರಿಚ್ ಕಂಪನಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ನೀಡಿದ ಭಾಷಣ.




ರಾಷ್ಟ್ರಿಯ ಏಕತೆ

         ನಮಸ್ಕಾರ! ಸನ್ಮಾನ್ಯ ಗುಡ್ ರಿಚ್ ಆಡಳಿತ ಮಂಡಳಿಯ ಪಧಾದಿಕಾರಿಗಳೆ, ಸಾಂಸ್ಕ್ರತಿಕ ಮಂಡಳಿಯ ಪಧಾದಿಕಾರಿಗಳೆ, ಹಾಗೂ ನನ್ನ ನೆಚ್ಚಿನ ಸಹೋದ್ಯೊಗಿಗಳೆ, ನಿಮಗೆಲ್ಲ ಗುರುರಾಜನ ಆತ್ಮೀಯ ನಮಸ್ಕಾರಗಳು.
          ರಾಷ್ಟ್ರಿಯ ಏಕತೆ ಒಂದು ಚಿಂತನ ಮಂಥನ. ಭರತ ಖಂಡ ಅಂದರೆ ಭಾರತ ಒಂದು ಕರ್ಮ ಭೂಮಿ. ಗಂಗೇ ಚ ಯಮುನೇ ಚ ಗೊದಾವರಿ ಸರಸ್ವತಿ ನರ್ಮದಾ ಸಿಂಧು ಕಾವೇರಿ ಜಲೆಸ್ಮಿನ್ ಸನ್ನಿದಿಂಕುರು, ಹೀಗೆ ಹತ್ತು ಹಲವು ನದಿಗಳ ಉಗಮ ಸ್ಥಾನ. ಇಲ್ಲಿ ಅನೇಕ ಜಾತಿಗಳಿವೆ, ಮತಗಳಿವೆ, ಪಂಥಗಳಿವೆ, ಪಂಗಡಗಳಿವೆ, ವಿವಿಧ ಭಾಷೆ, ಹಲವು ಆಚರಣೆಗಳು, ಹಬ್ಬಗಳು, ವೇಷಭೂಷಣಗಳು, ಆದರೂ! ನಾವೇಲ್ಲ ಒಂದೇ, ನಾವು ಭಾರತೀಯರು, ನಮ್ಮದು ಮನುಜ ಮತ ವಿಶ್ವ ಪಥ ಎನ್ನುವುದೇ ಈ ರಾಷ್ಟ್ರಿಯ ಏಕತೆ.
          ಸುಮಾರು ೨೦೦೦ ವರುಷಗಳ ಹಿಂದೆ ಭರತ ಖಂಡವು ಅನೇಕ ಪ್ರಾಂತ್ಯ ರಾಜ್ಯಗಳಾಗಿ ಹರಿದು ಹಂಚಿ ಹೋಗಿತ್ತು. ಮೊಗಲರು, ಸುಲ್ತಾನರು, ಮೌರ್ಯರು, ಹೂಣರು, ಚಾಲುಕ್ಯರು, ಚೋಳರು, ರಜಪೂತರು, ಹೊಯ್ಸಳರು ಹೀಗೆ ಆನೇಕ ರಾಜ ಮನೆತನದವರು ಆಳುತ್ತಿದರು. ಆದರೆ ಇವರ ನಡುವೆ ಸಾಮರಸ್ಯವಿರಲಿಲ್ಲ, ಸ್ನೇಹವಿರಲಿಲ್ಲ ಒಗ್ಗಟ್ಟಿರಲಿಲ್ಲ. ಇದನ್ನೇ ಬಂಡವಾಳ ವಾಗಿರಿಸಿಕೊಂಡದ್ದು ವ್ಯಾಪರಕ್ಕಾಗಿ ಬಂದ ಬ್ರಿಟಿಷರು. ನೋಡು ನೋಡುತ್ತಿದ್ದಂತೆ ಬ್ರಿಟಿಷರು ಒಬ್ಬ ರಾಜನ ಸಹಾಯದಿಂದ ಇನ್ನೊಬ್ಬ ರಾಜನನ್ನು ಮುಗಿಸುತ್ತಾ, ನೀಲ ಗಗನವನ್ನು ಮೋಡಗಳು ಆವರಿಸಿಕೊಳ್ಳುವಂತೆ ಇಡೀ ಭರತ ಖಂಡವನ್ನೆ ಆವರಿಸಿ ಬಿಟ್ಟರು. ಮುಂದೆ ನಡೆದುದೆಲ್ಲ ಇತಿಹಾಸ..
          ಕ್ರಮೇಣ ಭಾರತೀಯರು ಬ್ರಿಟಿಷರ ಆಳ್ವಿಕೆ ಹಾಗೂ ದಬ್ಬಾಳಿಕೆಯಿಂದ ರೋಸಿ ಹೋದರು. ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಕಳೆದು ಕೊಂಡಿರುವ ಸ್ವಾತಂತ್ರ್ಯವನ್ನು ಮರಳಿ ಪಡೆಯುವ ಸಲುವಾಗಿ ಜಾತಿ-ಭೇದ-ಮತ-ಪಂತಗಳೆನ್ನದೆ ಭಾರತೀಯರೆಲ್ಲರೂ ಒಂದಾದರು. ಪ್ರಾರಂಭದಲ್ಲಿ ಇದನ್ನು ಹತ್ತಿಕ್ಕುವಲ್ಲಿ ಬ್ರಿಟಿಷರು ಯಶಸ್ವಿಯೂ ಆದರೂ. ಆದರೆ ಮುಂದಿನ ದಿನಗಳಲ್ಲಿ ಭಾರತೀಯರ ಒಗ್ಗಟ್ಟಿನ ಹೋರಾಟವನ್ನು ಮುರಿಯುವಲ್ಲಿ ವಿಫಲವಾದರು. ಸಂಪಬ್ಭರಿತ ಭಾರತವನ್ನು ಬಿಟ್ಟು ತೊಲಗಲೇ ಬೇಕಾಯಿತು. ಸ್ವಾತಂತ್ರ್ಯಕ್ಕಾಗಿ ಮಡಿದ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್, ಆಜಾದ್ ಮುಂತಾದ ಕ್ರಾಂತಿಕಾರಿಗಳ ರಕ್ತದಲ್ಲಿ ಯಾವುದೇ ಜಾತಿ ಮತದ ವಾಸನೆ ಇರಲಿಲ್ಲ. ಹಾಗೆಯೇ ಅಂಹಿಸಾ ತತ್ವದಲ್ಲಿ ಹೋರಾಡಿದ ಗಾಂಧಿ, ನೆಹರು, ತಿಲಕ್ ಮುಂತಾದ ಅಗ್ರ ಗಣ್ಯರ ಬೇವರಿನಲ್ಲಿ ಪಂಗಡ ಗಳಿರಲಿಲ್ಲ. ರಾಷ್ಟ್ರಿಯ ಏಕತೆಯಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದರೆ ಅದು ಅತಿಶಯೋಕ್ತಿ ಆಗಲಾರದು.
          ಸ್ವಾತಂತ್ರ್ಯ ನಂತರವೂ ನಾವು ಈ ಏಕತೆಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಹಿಂದೂ, ಮುಸ್ಲಿಂ, ಕ್ರ್ಯೆಸ್ತ, ಬುದ್ಧ, ಪಾರಸಿಯರೆಲ್ಲರೂ ಒಟ್ಟಾಗಿ ಅಣ್ಣ ತಮ್ಮಂದಿರಂತೆ ಬಾಳುತ್ತಿದಾರೆ. ಪ್ರತಿಯೊಬ್ಬರೂ ತಮ್ಮ ಧರ್ಮ, ಆಚರಣೆ, ಭಾಷೆಯನ್ನು ಆರಾಧಿಸಬೇಕು. ಹಾಗೆಯೇ ಪ್ರತಿಯೊಬ್ಬರೂ ಬೇರೆಯವರ ಧರ್ಮ, ಆಚರಣೆ, ಭಾಷೆಯನ್ನು ಗೌರವಿಸಬೇಕು. ಆಗಲೇ ನಾವು ನಮ್ಮ ಏಕತೆಯನ್ನು ಉಳಿಸಿಕೊಳ್ಳಬಹುದು.
         ನಮ್ಮಲ್ಲಿ ಸಣ್ಣಪುಟ್ಟ ಒಳ ಜಗಳ ಅಥವಾ ಅಭಿಪ್ರಾಯ ಭೇಧಗಳಿರಬಹುದು, ಆದರೆ ದೇಶದ ಹೆಸರು ಬಂದಾಗ ನಾವೇಲ್ಲ ಒಂದೆ ಎಂದು ಕಾರ್ಗಿಲ್ ಯುದ್ಧದಲ್ಲಾಗಲಿ, ಮುಂಬಯಿ ಬಾಂಬ್ ದುಂರತದಲ್ಲಾಗಲಿ ಪ್ರಂಪಚಕ್ಕೆ ತೋರಿಸಿ ಕೊಟ್ಟಿದ್ದೇವೆ. ಆದರೂ...!?
          ಪ್ರಸಕ್ತ ರಾಜಕೀಯ ಹಾಗೂ ಆಡಳಿತ ಬೆಳವಣಿಗೆ ನೋಡಿದರೆ ನಾವೆಲ್ಲೋ ಮತ್ತೆ ನಮ್ಮ ಏಕತೆಯನ್ನು ಕಳೆದು ಕೊಳ್ಳುತ್ತಿದ್ದೇವೆಯೋ ಅನ್ನಿಸುತ್ತಿದೆ. ದುಷ್ಟ ಹಾಗು ಭ್ರಷ್ಟ ಶಕ್ತಿಗಳು ಆಡಳಿತ ಯಂತ್ರದಲ್ಲಿ ನುಸುಳಿ ನಮ್ಮ ದೇಶವನ್ನು ಅವಸಾನದ ಅಂಚಿಗೆ ತಲುಪಿಸುತ್ತಿದ್ದಾರೆ. ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮಗುವಿನ ಹುಟ್ಟಿನಿಂದ, ಸಾಯುವವರೆಗಿನ ಸರ್ವ ರಂಗದಲ್ಲೂ ಭ್ರಷ್ಟಾಚಾರ ತಲೆ ಎತ್ತಿದೆ. ಯುವಜನರು ಹಾಗೂ ಸಜ್ಜನರು ಮೌನವಾಗಿದ್ದಾರೆ. ಸ್ನೇಹಿತರೆ ಒಂದಂತೂ ನಿಜ ದುರ್ಜನರ ಅಟ್ಟಹಾಸಕ್ಕೆ ಸಜ್ಜನರ ಮೌನವೇ ಕಾರಣ. ರಾಮಾಯಣದಲ್ಲೊಂದು ಸನ್ನಿವೇಶ ಬರುತ್ತೆ, ಶ್ರೀರಾಮ ಸೇನೆ ರಾವಣ ಸೇನೆಯನ್ನು ಮಣಿಸಿ ಸೀತೆಯನ್ನು ಬಂದುಮುಕ್ತಗೊಳಿಸಿ ಸ್ವದೇಶಕ್ಕೆ ಮರಳಲು ಅಣಿಯಾಗಿರುತ್ತಾರೆ. ಆಗ ಲಕ್ಷ್ಮಣ, ಅಣ್ಣನಾದ ರಾಮನಿಗೆ ಹೇಳುತ್ತಾನೆ, ನಾವು ಸ್ವದೇಶಕ್ಕೆ ಮರಳುವುದು ಬೇಡ, ನಾವು ಇಲ್ಲೆ ಸ್ವರ್ಣ ಲಂಕೆಯಲ್ಲೆ ಇರೋಣ, ಹೇಗೂ ನಮ್ಮ ರಾಜ್ಯವನ್ನು ಆಳಲು ಭರತನಿದ್ದಾನಲ್ಲ ಎಂದು ಹೇಳುತ್ತಾನೆ. ಆಗ ರಾಮ ಹೇಳುತ್ತಾನೆ "ಜನನಿ: ಜನ್ಮ ಭೂಮಿಷ್ಯ ಸ್ವರ್ಗಾದಪಿ ಗರಿಯಸಿ", ಹುಟ್ಟಿದ ಭೂಮಿ ಹೆತ್ತ ತಾಯಿ ಸ್ವರ್ಗಕ್ಕಿಂತ ಮೇಲು ಎಂದು. ಆದುದರಿಂದ ಭವ್ಯ ಭಾರತದ ದಿವ್ಯ ಪ್ರಜೆಗಳಾದ ನಾವೇಲ್ಲ ಭಾರತದ ಏಕತೆಗೆ ಹಾಗೂ ಏಳ್ಗತೆಗೆ ಶ್ರಮಿಸೋಣ. ಯುವ ಜನತೆ ಗುಡುಗಿದರೆ ವಿಧಾನಸೌಧ ನಡುಗೀತು ಎಂಬ ಮಾತಿನ ಬಿಸಿಯನ್ನು ನಮ್ಮ ಡೊಂಕು ಬಾಲದ ನಾಯಕರಿಗೆ ಮುಟ್ಟಿಸೋಣ. ನಮಗೆ ದೇಶ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಗಂಗೇ ಗಂಗೋತ್ರಿಯಲ್ಲಿ ಮಲೀನವಾಗಿದ್ದರೆ ಅದನ್ನು ಗಂಗೋತ್ರಿಯಲ್ಲೆ ಸರಿಪಡಿಸ ಬೇಕೇ ಹೊರತು ವಾರಾಣಾಸಿಯಲ್ಲಲ್ಲ. ಭ್ರಷ್ಟರ ಆಯ್ಕೆ ನಮ್ಮಿಂದಲೇ ಆಗಿದೆ, ಆದುದರಿಂದ ನಾವೇ ಸರಿಪಡಿಸಿಕೊಳ್ಳೋಣ ಬಲಿಷ್ಟ ಭಾರತವನ್ನು ಕಟ್ಟೋಣ ಎಂದು ಹೇಳುತ್ತಾ ನನ್ನ ಮಾತಿಗೆ ಪೂರ್ಣ ವಿರಾಮ ಹಾಕುವ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟ ಸಾಂಸ್ಕ್ರತಿಕ ಮಂಡಳಿಯ ಪಧಾದಿಕಾರಿಗಳಿಗೆ ಧನ್ಯವಾದ ಹೇಳುತ್ತಾ, ಹಾಗೂ ಶಿಸ್ತಿನ ಸಿಪಾಯಿಗಳಂತೆ ನನ್ನ ಮಾತನ್ನು ಆಲಿಸಿದ ಸಮಸ್ತ ಗುಡ್ ರಿಚ್ ಮಿತ್ರ ಭಾಂಧವರಿಗೆ ಧನ್ಯವಾದ ಹೇಳುತ್ತಾ ನನ್ನ ಮಾತಿಗೆ ಸಂಪೂರ್ಣ ವಿರಾಮ ಹಾಕುತ್ತೇನೆ...
 
         ಜೈ ಹಿಂದ್...
        ಸರ್ವೇ ಜನಹಃ ಸುಖಿನೊಃ ಭವಂತುಃ ಸಮಸ್ತ ಸನ್ಮ್Oಗಲ ಕಾರ್ಯ ಸಿದ್ಧಿರಸ್ತುಃ.......