Pages

Saturday, September 10, 2011

ಗುಡ್ ರಿಚ್ ಕಂಪನಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ನೀಡಿದ ಭಾಷಣ.
ರಾಷ್ಟ್ರಿಯ ಏಕತೆ

         ನಮಸ್ಕಾರ! ಸನ್ಮಾನ್ಯ ಗುಡ್ ರಿಚ್ ಆಡಳಿತ ಮಂಡಳಿಯ ಪಧಾದಿಕಾರಿಗಳೆ, ಸಾಂಸ್ಕ್ರತಿಕ ಮಂಡಳಿಯ ಪಧಾದಿಕಾರಿಗಳೆ, ಹಾಗೂ ನನ್ನ ನೆಚ್ಚಿನ ಸಹೋದ್ಯೊಗಿಗಳೆ, ನಿಮಗೆಲ್ಲ ಗುರುರಾಜನ ಆತ್ಮೀಯ ನಮಸ್ಕಾರಗಳು.
          ರಾಷ್ಟ್ರಿಯ ಏಕತೆ ಒಂದು ಚಿಂತನ ಮಂಥನ. ಭರತ ಖಂಡ ಅಂದರೆ ಭಾರತ ಒಂದು ಕರ್ಮ ಭೂಮಿ. ಗಂಗೇ ಚ ಯಮುನೇ ಚ ಗೊದಾವರಿ ಸರಸ್ವತಿ ನರ್ಮದಾ ಸಿಂಧು ಕಾವೇರಿ ಜಲೆಸ್ಮಿನ್ ಸನ್ನಿದಿಂಕುರು, ಹೀಗೆ ಹತ್ತು ಹಲವು ನದಿಗಳ ಉಗಮ ಸ್ಥಾನ. ಇಲ್ಲಿ ಅನೇಕ ಜಾತಿಗಳಿವೆ, ಮತಗಳಿವೆ, ಪಂಥಗಳಿವೆ, ಪಂಗಡಗಳಿವೆ, ವಿವಿಧ ಭಾಷೆ, ಹಲವು ಆಚರಣೆಗಳು, ಹಬ್ಬಗಳು, ವೇಷಭೂಷಣಗಳು, ಆದರೂ! ನಾವೇಲ್ಲ ಒಂದೇ, ನಾವು ಭಾರತೀಯರು, ನಮ್ಮದು ಮನುಜ ಮತ ವಿಶ್ವ ಪಥ ಎನ್ನುವುದೇ ಈ ರಾಷ್ಟ್ರಿಯ ಏಕತೆ.
          ಸುಮಾರು ೨೦೦೦ ವರುಷಗಳ ಹಿಂದೆ ಭರತ ಖಂಡವು ಅನೇಕ ಪ್ರಾಂತ್ಯ ರಾಜ್ಯಗಳಾಗಿ ಹರಿದು ಹಂಚಿ ಹೋಗಿತ್ತು. ಮೊಗಲರು, ಸುಲ್ತಾನರು, ಮೌರ್ಯರು, ಹೂಣರು, ಚಾಲುಕ್ಯರು, ಚೋಳರು, ರಜಪೂತರು, ಹೊಯ್ಸಳರು ಹೀಗೆ ಆನೇಕ ರಾಜ ಮನೆತನದವರು ಆಳುತ್ತಿದರು. ಆದರೆ ಇವರ ನಡುವೆ ಸಾಮರಸ್ಯವಿರಲಿಲ್ಲ, ಸ್ನೇಹವಿರಲಿಲ್ಲ ಒಗ್ಗಟ್ಟಿರಲಿಲ್ಲ. ಇದನ್ನೇ ಬಂಡವಾಳ ವಾಗಿರಿಸಿಕೊಂಡದ್ದು ವ್ಯಾಪರಕ್ಕಾಗಿ ಬಂದ ಬ್ರಿಟಿಷರು. ನೋಡು ನೋಡುತ್ತಿದ್ದಂತೆ ಬ್ರಿಟಿಷರು ಒಬ್ಬ ರಾಜನ ಸಹಾಯದಿಂದ ಇನ್ನೊಬ್ಬ ರಾಜನನ್ನು ಮುಗಿಸುತ್ತಾ, ನೀಲ ಗಗನವನ್ನು ಮೋಡಗಳು ಆವರಿಸಿಕೊಳ್ಳುವಂತೆ ಇಡೀ ಭರತ ಖಂಡವನ್ನೆ ಆವರಿಸಿ ಬಿಟ್ಟರು. ಮುಂದೆ ನಡೆದುದೆಲ್ಲ ಇತಿಹಾಸ..
          ಕ್ರಮೇಣ ಭಾರತೀಯರು ಬ್ರಿಟಿಷರ ಆಳ್ವಿಕೆ ಹಾಗೂ ದಬ್ಬಾಳಿಕೆಯಿಂದ ರೋಸಿ ಹೋದರು. ಅವರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಕಳೆದು ಕೊಂಡಿರುವ ಸ್ವಾತಂತ್ರ್ಯವನ್ನು ಮರಳಿ ಪಡೆಯುವ ಸಲುವಾಗಿ ಜಾತಿ-ಭೇದ-ಮತ-ಪಂತಗಳೆನ್ನದೆ ಭಾರತೀಯರೆಲ್ಲರೂ ಒಂದಾದರು. ಪ್ರಾರಂಭದಲ್ಲಿ ಇದನ್ನು ಹತ್ತಿಕ್ಕುವಲ್ಲಿ ಬ್ರಿಟಿಷರು ಯಶಸ್ವಿಯೂ ಆದರೂ. ಆದರೆ ಮುಂದಿನ ದಿನಗಳಲ್ಲಿ ಭಾರತೀಯರ ಒಗ್ಗಟ್ಟಿನ ಹೋರಾಟವನ್ನು ಮುರಿಯುವಲ್ಲಿ ವಿಫಲವಾದರು. ಸಂಪಬ್ಭರಿತ ಭಾರತವನ್ನು ಬಿಟ್ಟು ತೊಲಗಲೇ ಬೇಕಾಯಿತು. ಸ್ವಾತಂತ್ರ್ಯಕ್ಕಾಗಿ ಮಡಿದ ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್, ಆಜಾದ್ ಮುಂತಾದ ಕ್ರಾಂತಿಕಾರಿಗಳ ರಕ್ತದಲ್ಲಿ ಯಾವುದೇ ಜಾತಿ ಮತದ ವಾಸನೆ ಇರಲಿಲ್ಲ. ಹಾಗೆಯೇ ಅಂಹಿಸಾ ತತ್ವದಲ್ಲಿ ಹೋರಾಡಿದ ಗಾಂಧಿ, ನೆಹರು, ತಿಲಕ್ ಮುಂತಾದ ಅಗ್ರ ಗಣ್ಯರ ಬೇವರಿನಲ್ಲಿ ಪಂಗಡ ಗಳಿರಲಿಲ್ಲ. ರಾಷ್ಟ್ರಿಯ ಏಕತೆಯಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದರೆ ಅದು ಅತಿಶಯೋಕ್ತಿ ಆಗಲಾರದು.
          ಸ್ವಾತಂತ್ರ್ಯ ನಂತರವೂ ನಾವು ಈ ಏಕತೆಯನ್ನು ಅನುಸರಿಸಿಕೊಂಡು ಬಂದಿದ್ದೇವೆ. ಹಿಂದೂ, ಮುಸ್ಲಿಂ, ಕ್ರ್ಯೆಸ್ತ, ಬುದ್ಧ, ಪಾರಸಿಯರೆಲ್ಲರೂ ಒಟ್ಟಾಗಿ ಅಣ್ಣ ತಮ್ಮಂದಿರಂತೆ ಬಾಳುತ್ತಿದಾರೆ. ಪ್ರತಿಯೊಬ್ಬರೂ ತಮ್ಮ ಧರ್ಮ, ಆಚರಣೆ, ಭಾಷೆಯನ್ನು ಆರಾಧಿಸಬೇಕು. ಹಾಗೆಯೇ ಪ್ರತಿಯೊಬ್ಬರೂ ಬೇರೆಯವರ ಧರ್ಮ, ಆಚರಣೆ, ಭಾಷೆಯನ್ನು ಗೌರವಿಸಬೇಕು. ಆಗಲೇ ನಾವು ನಮ್ಮ ಏಕತೆಯನ್ನು ಉಳಿಸಿಕೊಳ್ಳಬಹುದು.
         ನಮ್ಮಲ್ಲಿ ಸಣ್ಣಪುಟ್ಟ ಒಳ ಜಗಳ ಅಥವಾ ಅಭಿಪ್ರಾಯ ಭೇಧಗಳಿರಬಹುದು, ಆದರೆ ದೇಶದ ಹೆಸರು ಬಂದಾಗ ನಾವೇಲ್ಲ ಒಂದೆ ಎಂದು ಕಾರ್ಗಿಲ್ ಯುದ್ಧದಲ್ಲಾಗಲಿ, ಮುಂಬಯಿ ಬಾಂಬ್ ದುಂರತದಲ್ಲಾಗಲಿ ಪ್ರಂಪಚಕ್ಕೆ ತೋರಿಸಿ ಕೊಟ್ಟಿದ್ದೇವೆ. ಆದರೂ...!?
          ಪ್ರಸಕ್ತ ರಾಜಕೀಯ ಹಾಗೂ ಆಡಳಿತ ಬೆಳವಣಿಗೆ ನೋಡಿದರೆ ನಾವೆಲ್ಲೋ ಮತ್ತೆ ನಮ್ಮ ಏಕತೆಯನ್ನು ಕಳೆದು ಕೊಳ್ಳುತ್ತಿದ್ದೇವೆಯೋ ಅನ್ನಿಸುತ್ತಿದೆ. ದುಷ್ಟ ಹಾಗು ಭ್ರಷ್ಟ ಶಕ್ತಿಗಳು ಆಡಳಿತ ಯಂತ್ರದಲ್ಲಿ ನುಸುಳಿ ನಮ್ಮ ದೇಶವನ್ನು ಅವಸಾನದ ಅಂಚಿಗೆ ತಲುಪಿಸುತ್ತಿದ್ದಾರೆ. ಎಲ್ಲೆಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮಗುವಿನ ಹುಟ್ಟಿನಿಂದ, ಸಾಯುವವರೆಗಿನ ಸರ್ವ ರಂಗದಲ್ಲೂ ಭ್ರಷ್ಟಾಚಾರ ತಲೆ ಎತ್ತಿದೆ. ಯುವಜನರು ಹಾಗೂ ಸಜ್ಜನರು ಮೌನವಾಗಿದ್ದಾರೆ. ಸ್ನೇಹಿತರೆ ಒಂದಂತೂ ನಿಜ ದುರ್ಜನರ ಅಟ್ಟಹಾಸಕ್ಕೆ ಸಜ್ಜನರ ಮೌನವೇ ಕಾರಣ. ರಾಮಾಯಣದಲ್ಲೊಂದು ಸನ್ನಿವೇಶ ಬರುತ್ತೆ, ಶ್ರೀರಾಮ ಸೇನೆ ರಾವಣ ಸೇನೆಯನ್ನು ಮಣಿಸಿ ಸೀತೆಯನ್ನು ಬಂದುಮುಕ್ತಗೊಳಿಸಿ ಸ್ವದೇಶಕ್ಕೆ ಮರಳಲು ಅಣಿಯಾಗಿರುತ್ತಾರೆ. ಆಗ ಲಕ್ಷ್ಮಣ, ಅಣ್ಣನಾದ ರಾಮನಿಗೆ ಹೇಳುತ್ತಾನೆ, ನಾವು ಸ್ವದೇಶಕ್ಕೆ ಮರಳುವುದು ಬೇಡ, ನಾವು ಇಲ್ಲೆ ಸ್ವರ್ಣ ಲಂಕೆಯಲ್ಲೆ ಇರೋಣ, ಹೇಗೂ ನಮ್ಮ ರಾಜ್ಯವನ್ನು ಆಳಲು ಭರತನಿದ್ದಾನಲ್ಲ ಎಂದು ಹೇಳುತ್ತಾನೆ. ಆಗ ರಾಮ ಹೇಳುತ್ತಾನೆ "ಜನನಿ: ಜನ್ಮ ಭೂಮಿಷ್ಯ ಸ್ವರ್ಗಾದಪಿ ಗರಿಯಸಿ", ಹುಟ್ಟಿದ ಭೂಮಿ ಹೆತ್ತ ತಾಯಿ ಸ್ವರ್ಗಕ್ಕಿಂತ ಮೇಲು ಎಂದು. ಆದುದರಿಂದ ಭವ್ಯ ಭಾರತದ ದಿವ್ಯ ಪ್ರಜೆಗಳಾದ ನಾವೇಲ್ಲ ಭಾರತದ ಏಕತೆಗೆ ಹಾಗೂ ಏಳ್ಗತೆಗೆ ಶ್ರಮಿಸೋಣ. ಯುವ ಜನತೆ ಗುಡುಗಿದರೆ ವಿಧಾನಸೌಧ ನಡುಗೀತು ಎಂಬ ಮಾತಿನ ಬಿಸಿಯನ್ನು ನಮ್ಮ ಡೊಂಕು ಬಾಲದ ನಾಯಕರಿಗೆ ಮುಟ್ಟಿಸೋಣ. ನಮಗೆ ದೇಶ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎನ್ನುವುದು ಮುಖ್ಯ. ಗಂಗೇ ಗಂಗೋತ್ರಿಯಲ್ಲಿ ಮಲೀನವಾಗಿದ್ದರೆ ಅದನ್ನು ಗಂಗೋತ್ರಿಯಲ್ಲೆ ಸರಿಪಡಿಸ ಬೇಕೇ ಹೊರತು ವಾರಾಣಾಸಿಯಲ್ಲಲ್ಲ. ಭ್ರಷ್ಟರ ಆಯ್ಕೆ ನಮ್ಮಿಂದಲೇ ಆಗಿದೆ, ಆದುದರಿಂದ ನಾವೇ ಸರಿಪಡಿಸಿಕೊಳ್ಳೋಣ ಬಲಿಷ್ಟ ಭಾರತವನ್ನು ಕಟ್ಟೋಣ ಎಂದು ಹೇಳುತ್ತಾ ನನ್ನ ಮಾತಿಗೆ ಪೂರ್ಣ ವಿರಾಮ ಹಾಕುವ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟ ಸಾಂಸ್ಕ್ರತಿಕ ಮಂಡಳಿಯ ಪಧಾದಿಕಾರಿಗಳಿಗೆ ಧನ್ಯವಾದ ಹೇಳುತ್ತಾ, ಹಾಗೂ ಶಿಸ್ತಿನ ಸಿಪಾಯಿಗಳಂತೆ ನನ್ನ ಮಾತನ್ನು ಆಲಿಸಿದ ಸಮಸ್ತ ಗುಡ್ ರಿಚ್ ಮಿತ್ರ ಭಾಂಧವರಿಗೆ ಧನ್ಯವಾದ ಹೇಳುತ್ತಾ ನನ್ನ ಮಾತಿಗೆ ಸಂಪೂರ್ಣ ವಿರಾಮ ಹಾಕುತ್ತೇನೆ...
 
         ಜೈ ಹಿಂದ್...
        ಸರ್ವೇ ಜನಹಃ ಸುಖಿನೊಃ ಭವಂತುಃ ಸಮಸ್ತ ಸನ್ಮ್Oಗಲ ಕಾರ್ಯ ಸಿದ್ಧಿರಸ್ತುಃ.......

Monday, October 6, 2008

"1700 11th AVE NE ಅಪಾರ್ಟ್ ಮೆಂಟ್ - 6"


         
          ಇದೇನಿದು ಅರ್ಥವಾಗದ ವಿಷಯವೆಂದು ತಲೆಕೆಡಿಸಿಕೊಳ್ಳಬೇಡಿ. ಹಾ! ಇದು ನಾನು ನನ್ನ ಸಹೋದ್ಯೋಗಿಗಳೊಂದಿಗೆ ದೂರದ ಅಮೇರಿಕಾ ದೇಶದಲ್ಲಿ ತಂಗಿದ್ದ ಮನೆಯ ವಿಳಾಸ. ವರುಷದ ಬಹು ಭಾಗ ಮಂಜು ಕವಿದು, ನಿಶಬ್ದ, ನಿಶ್ಕಲ್ಮಶ ವಾತಾವರಣವಿರುವ ದಕ್ಷಿಣ ಅಮೇರಿಕಾದ ಒಂದು ಸಣ್ಣ ಪಟ್ಟಣ. ಅದೇಕೊ ಈ ಅಪಾರ್ಟ್ ಮೆಂಟುಗೂ ನಮಗೂ ಅಭಿನಾಭಾವ ಸಂಬಂಧ. ಸುಮಾರು ಒಂದು ವರುಷಗಳ ಕಾಲ ನನ್ನ ಸಹೋದ್ಯೋಗಿಗಳು ಈ ಮನೆಗೆ ಒಬ್ಬರಾದ ನಂತರ ಒಬ್ಬರಂತೆ ಸರದಿ ರೂಪದಲ್ಲಿ ಬಂದು ಹೋಗುತ್ತಿದರು. ಮೊನ್ನೆ ಮನಸ್ಸಿಲ್ಲದ ಮನಸ್ಸಿನಿಂದ ನನ್ನ ಎಲ್ಲಾ ನೆನಪುಗಳನ್ನು ಮೆಲುಕು ಹಾಕುತ್ತಾ ಈ ಮನೆಯನ್ನು ತೆರವುಗೊಳಿಸಿದೆ.
          ಈ ಆಧುನಿಕ ಗಣಕಯಂತ್ರ ಯುಗದಲ್ಲಿ ವಿದೇಶ ಪ್ರಯಾಣ ತುಂಬಾ ಮಾಮುಲು ಆಗಿ ಬಿಟ್ಟಿದೆ. ತಮ್ಮ ಭವಿಷ್ಯದ ದ್ರಿಷ್ಟಿಯಿಂದ ಅನ್ ಸೈಟ್ ಬಹಳ ಪ್ರಾಮುಖ್ಯ ಎಂದು ಅಪನಂಬಿಕೆ ಹೊಂದಿದ್ದ ಯುವಜನಾಂಗದಲ್ಲಿ ನಾನು ಒಬ್ಬ ಎಂದು ಹೇಳಲು ತುಂಬಾ ವಿಷಾದವಾಗುತ್ತದೆ. ಹೀಗೆ ಹತ್ತು ಹಲವು ಕನಸು, ಕಲ್ಪನೆ ಹೊತ್ತು ನನ್ನ ಸಹೋದ್ಯೋಗಿಯೊಂದಿಗೆ ಕನಸಿನ ಪ್ರಯಾಣ ಬೆಳೆಸಿದ್ದೆ. ಲೋಹದ ಹಕ್ಕಿಯ ತೆಕ್ಕೆಯಿಂದ ಇಳಿಯುತ್ತಿದ್ದಂತೆ, ನಮ್ಮನ್ನೆ ಕಾಯುತ್ತಿದ್ದ ಹವಾ ನಿಯಂತ್ರಿತ ಕಾರು ನಮ್ಮನ್ನು ಈ ಅಪಾರ್ಟ್ ಮೆಂಟ್ - 6 ಗೆ ತಲುಪಿಸಿತು. ಹೊಸ ಮದುಮಗಳು ಬಲಗಾಲಿಟ್ಟು ಮನೆಯೊಳಗೆ ಬರುವಂತೆ ನಾವು ಕೂಡ ಬಲಗಾಲಿಟ್ಟೆ ಒಳನಡೆದೆವು. ಆಧುನಿಕ ಸೌಲಭ್ಯನೊಳಗೊಂಡ ವಿಶಾಲ ಹಾಗೂ ಸುಂದರವಾದ ಮನೆ ಇದಾಗಿತ್ತು. ದಿನದ 24 ಘಂಟೆ ನಿರಂತರ ವಿದ್ಯುತ್, ನೀರು, ಇಂಟರ್ ನೆಟ್ ಸೌಲಭ್ಯವಿತ್ತು. ಮಾರನೆ ದಿನದಿಂದಲೆ ನಮ್ಮ ಕಚೇರಿಯ ಕೆಲಸ ಚುರುಕುಗೊಂಡಿತು. ದಿನ ಕಳೆದಂತೆ ಮತ್ತಷ್ಟು ಸಹೋದ್ಯೋಗಿಗಳು ಈ ಮನೆಯ ಸದಸ್ಯರಾದರು. ನಿಶಬ್ದತೆಯಿಂದ ಕೂಡಿದ ಮನೆಗೆ ಕಳೆ ಬರ ತೊಡಗಿತು. ಮನೆಯಲ್ಲಿನ ಚಟುವಟಿಕೆಗಳೂ ಕೂಡ ಜಾಸ್ತಿಯಾಗತೊಡಗಿತು.
          ಆಧುನಿಕತೆ ಮುಂದುವರಿದಂತೆ ಬೆಂಗಳೂರಿನಲ್ಲಿ ಯಾರಿಗೂ ಯಾವುದಕ್ಕೂ ಸಮಯ ಸಿಗುದೆ ಅಪರೂಪವಾಗಿ ಬಿಟ್ಟಿದೆ. ದಿನದ ಮೊದಲಾರ್ದ ಕಚೇರಿಯಲ್ಲಾದರೆ ಉಳಿದಾರ್ದ BMTC ಬಸ್ಸಿನಲ್ಲಾಗುತ್ತದೆ. ಇದಕ್ಕೆ ವಿರುದ್ದ ಎಂಬಂತೆ ನಮಗೆ ಇಲ್ಲಿ ನಮ್ಮ ಇಚ್ಚೆಗೂ ಮೀರಿದಸ್ಟು ಸಮಯ ಎಲ್ಲದಕ್ಕೂ ಸಿಗುತ್ತಿತ್ತು. ಹೀಗಾಗಿ ಕಚೇರಿಯ ನಂತರದ ಚಟುವಟಿಕೆಗಳೆ ಬಹಳ ಸ್ವಾರಸ್ಯಕರವಗಿತ್ತು. ಪಶ್ಚಿಮದಲ್ಲಿ ಸೂರ್ಯಸ್ತವಾಗುತ್ತಿದಂತೆ ಅಪಾರ್ಟ್ ಮೆಂಟ್ - 6 ನಲ್ಲಿ ಸೂರ್ಯೊದಯವಾಗುತ್ತಿತ್ತು. ಒಂದು ತುದಿಯಲ್ಲಿ ಲತಾ ಮಂಗೇಶಕರ್ ಹಾಡು ಕೇಳುವವರು, ಮತ್ತೊಂದು ಕಡೆ ಬಬ್ರುವಾಹನ ಕಾಳಗ, ಕೆಲವರು ಗೆಳೆಯ ಗೆಳೆಯರೊದಿಗೆ ಚಾಟಿಂಗ್ ನಲ್ಲಿ ಮಗ್ನ, ವ್ಯೆವಾಹಿತರದು ದೂರ ಸಂಪರ್ಕದಲ್ಲಿ ಅರ್ಧಾಂಗಿ ಜೊತೆ ಸರಸ ಸಲ್ಲಾಪ, ಒಟ್ಟಿನಲ್ಲಿ ಕತ್ತಲಾಗುತ್ತಿದಂತೆ ಮಾತಾಡು ಇಂಡಿಯಾ ಮಾತಾಡು..!!.. ಇನ್ನು ಊಟ, ಕಾಫಿ ತಿಂಡಿ ವಿಷಯವಂತು ಇನ್ನಷ್ಟು ಸ್ವಾರಸ್ಯಕರವಾಗಿತ್ತು. ನಮ್ಮದು ಪುರುಷ ಪ್ರಧಾನ ಸಮಾಜ ನೋಡಿ, ಪುರುಷರಿಗೆ ಅಡಿಗೆ ಮನೆಯೆಂದರೆ ಅದೇಕೊ ಅಲರ್ಜಿ. ಮಾಡಿದ ಅಡಿಗೆಯನ್ನು ತಿಂದಷ್ಟೆ ಅಭ್ಯಾಸ ನಮಗೆ. ಕಿಸೆಯಲ್ಲಿ ಹಣವಿದ್ದರೆ ಬೆಂಗಳೂರಿನ ಯಾವ ತುದಿಗೆ ನಡು ರಾತ್ರಿ ಹೋದರು ಪೊಂಗಲ್ ಪುಳಿಯೊಗರೆಗೇನು ಕೊರತೆಯಿಲ್ಲ. ಹೀಗಾಗಿ ಮನೆಯಲ್ಲಿ ಹೆಚ್ಚಿನವರು ಬೆಂಕಿ ಹಚ್ಚುದೆ ಮರೆತು ಬಿಟ್ಟಿದ್ದಾರೆ. ಆದರೆ ಇಲ್ಲಿ ಹೊರಗಡೆ ಹೋದರೆ ದನ ತಿನ್ನುವ ಹುಲ್ಲು ತಿನ್ನ ಬೇಕೆ ಹೊರತು ಬೇರೆನು ನಮ್ಮ ದೇಹಕ್ಕೆ ಒಗ್ಗುವಂತದು ಸಿಗುವುದಿಲ್ಲ. ಹಾಗಾಗಿ ಮನೆಯಲ್ಲೆ ವಿಧ ವಿಧದ ತಿಂಡಿಗಳನ್ನು ಬಹಳ ಪ್ರಯತ್ನ ಪಟ್ಟು ಮಾಡುತ್ತಿದೆವು. ಅಡಿಗೆ ಮಾಡುದರಲ್ಲಿ ಯುವ ಪಡೆ ಗ್ರಹಸ್ಥರನ್ನು ಮೀರಿಸಿತ್ತು. ನಾವೇನು ನಳ ಭೀಮಸೇನರಿಗೆ ಕಮ್ಮಿ ಇಲ್ಲ ಎಂದು ಒಳ ಮನಸ್ಸು ಅಂದುಕೊಳ್ಳದೆ ಇರಲಿಲ್ಲ. ಅಡಿಗೆ ರೆಡಿಯಾಗುತ್ತಿದಂತೆ ಬಳ್ಳಾರಿ ಜೈಲ್ ನಲ್ಲಿ ಕೈದಿಗಳು ತಟ್ಟೆ ಹಿಡಿದು ಸಾಲು ನಿಲ್ಲುವಂತೆ, ಮ್ಯಾನೆಜರ್ ಲೀಡ್ ಎನ್ನದೆ ಎಲ್ಲರೂ ಬರುತ್ತಿದರು. ಯಾಕೆಂದರೆ 5 ನಿಮಿಷ ಕಳೆದರೆ ಪಾತ್ರೆ ಖಾಲಿಯಾಗಿ ಬಿಡುತ್ತಿತ್ತು. ಇಲ್ಲೆ ನಮಗೆ ಅನ್ನದ ನಿಜವಾದ ಮಹತ್ವ ತಿಳಿದದ್ದು. ಅನ್ನದಾತೋ ಸುಖಿನೋ ಭವಃ ಸೂಕ್ತಿಗೆ ನಿಜವಾದ ಅರ್ಥ ದೊರಕಿದ್ದು. ಇನ್ನು ವಾರಾಂತ್ಯವಾಗುತ್ತಿದಂತೆ ನಮ್ಮ ಇಚ್ಚೆಗನುಸಾರವಾಗಿ ಬೇರೆ ಬೇರೆ ತಂಡವಾಗಿ ಬೇರ್ಪಡಿಸುತ್ತಿದೆವು. ಕಂಠ ಪೂರ್ತಿ ಕುಡಿದು, ಕುಣಿದು ಕುಪ್ಪಳಿಸುವ, ವಾರದಲ್ಲಿ ಗಳಿಸಿದ ಹಣವನ್ನು ವ್ಯಯಿಸುವ ಅಮೇರಿಕ್ಕನ್ನರ ಮೊಜನ್ನು ಸಂದಿಯಲ್ಲಿ ನಿಂತು ನೋಡುವ ಒಂದು ತಂಡವಾದರೆ, ನಿದ್ರಾದೇವಿಯ ಬಿಸಿ ಅಪ್ಪುಗೆಯಲ್ಲೆ ವಾರಾಂತ್ಯ ಕಳೆಯುವ ಒಂದು ಅಪರೂಪದ ವರ್ಗ. ವಾರಕ್ಕೆ ಬೇಕಾಗುವ ಹಣ್ಣು ತರಕಾರಿ ಸಾಮಾನುಗಳನ್ನು ತರುವ ಗ್ರಹಸ್ಥ ವರ್ಗ. ಬೀರು ಕುಡಿದು ಇಸ್ಪಿಟು ಆಡಿ, ಜಗ್ಗೇಶ್ ಪಿಲ್ಮ್ ನೋಡಿ ಮಜಾ ತಗೋಳುವ ಬ್ರಹ್ಮಚಾರಿಗಳ ಒಂದು ಬ್ರಹತ್ ತಂಡ. ಒಟ್ಟಿನಲ್ಲಿ ವಾರಾಂತ್ಯ ಒಂದು ದೀಪಾವಳಿ ಹಬ್ಬದಂತೆ ಖುಷಿ ನೀಡುತ್ತಿತ್ತು.ಸತ್ಯ ಸಂಗತಿಯೆಂದರೆ ಈ ಅನ್ ಸೈಟ್ ಕೆಲಸದಿಂದ ನನ್ನ ಜ್ನಾನರ್ಜನೆಯಾಯಿತೊ ಇಲ್ಲವೊ ಗೊತ್ತಿಲ್ಲ ಆದರೆ ನನ್ನ ಸಹೋದ್ಯೊಗಿಗಳ ಮನಸ್ಥಿತಿ ತಿಳಿದುಕೊಳ್ಳುವ ಸುವರ್ಣ ಅವಕಾಶ ದೊರೆತಂತಾಗಿತ್ತು. ಕೆಲವರ ಕಂಜೂಸುತನ, ಉದ್ಢಟತನ, ಹಾಸ್ಯ, ಶ್ರಂಗಾರ, ಕುತೂಹಲಬರಿತ ಹವ್ಯಾಸಗಳು, ನಡೆದು ಬಂದ ದಾರಿ, ಜೀವನದ ಸಾಧನೆಗಳು ಹೀಗೆ ಆನೇಕ ಕೆಟ್ಟ ಹಾಗೂ ಒಳ್ಳೆಯ ಗುಣಗಳು ಕಚೇರಿಯಲ್ಲಿ ವ್ಯಕ್ತವಾಗದೆ ಇದ್ದುದು ಮನೆಯಲ್ಲಿ ಗೋಚರಿಸುತ್ತಿತ್ತು, ವ್ಯಕ್ತವಾಗುತ್ತಿತ್ತು. ಕೆಲವೊಮ್ಮೆ ನಮ್ಮೊಳಗೆ ವಾದ ವಿವಾದ, ಮಾತಿನ ಚಕಮಕಿ ನಡೆಯದೆ ಇರಲಿಲ್ಲ.
          ಹೀಗೆ ಹತ್ತು ಹಲವು ಸಿಹಿ ಕಹಿ ಘಟನೆಗಳನ್ನು ಅಂಟಿಸಿಕೊಂಡಿದ ಅಪಾರ್ಟ್ ಮೆಂಟ್ - 6 ಬಾಂಧವ್ಯ ಕೊನೆಗೂ ಮುಕ್ತಾಯವಾಗಿದೆ. ಭಾರತೀಯ ಮಸಾಲೆ ಪಧಾರ್ಥಗಳ ವಾಸನೆಯಿಂದ, ರಾಜಕುಮಾರ್ - ಲತಾಮಂಗೇಶಕರ್ ಹಾಡಿನಿಂದ, ರಜನಿ - ಉಪೇಂದ್ರ ಡ್ಯೆಲಾಗಳಿಂದ ಅಪಾರ್ಟ್ ಮೆಂಟ್ - 6 ಗೆ ಮುಕ್ತಿ ದೊರೆತಂತಾಗಿದೆ. ಹೆಂಡತಿ ಕಳಕೊಂಡ ವಿಧುರನಂತೆ ಅಪಾರ್ಟ್ ಮೆಂಟ್ - 6 ಬೀಕೊ ಎನ್ನುತ್ತಿದೆ. ಮತ್ತೊಮ್ಮೆ ಸುಸಂಸ್ಕ್ರತ ಭಾರತೀಯರ ಸ್ಪರ್ಶಕ್ಕಾಗಿ ಕಾಯುತ್ತಿದೆ.
         ಕೊನೆ ಹನಿ; ಭಾರತೀಯ ಸಂಸ್ಕ್ರತಿಯು ಮಾನವೀಯ ಮೌಲ್ಯಗಳಿಂದ ಸಂಪ್ಫದಭರಿತವಾಗಿದ್ದರು ವಿದೇಶಿಯರಿಂದ ನಾವು ಕಲಿಯುದು ಬಹಳ ಇದೆ ಎಂಬುದು ನನ್ನ ಮುಕ್ತ ಮನಸ್ಸಿನ ಅನಿಸಿಕೆ...

Saturday, October 4, 2008

"ತುಳುನಾಡ ವೈಭವ-ಭೂತದ ಕೋಲ"


                    ಕರ್ನಾಟಕ ರಾಜ್ಯದ ಮುಂಚೂಣಿ ಜಿಲ್ಲೆಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯೂ ಒಂದು. ಕಲೆ, ಸಂಸ್ರ್ಕಿತಿ, ಸಾಹಿತ್ಯ, ವಿದ್ಯಾಭ್ಯಾಸ, ಪಾಕಶಾಸ್ತ್ರ ಮುಂತಾದ ಕ್ಷೇತ್ರದಲ್ಲಿ ರಾಜ್ಯಕ್ಕೆ ಜಿಲ್ಲೆಯ ಕೊಡುಗೆ ಮಹತ್ವದ್ದು. ತುಳು ಇಲ್ಲಿನ ಬಹು ಜನರ ಆಡು ಭಾಷೆ. ಆನೇಕ ಜಾನಪದ ಕಲೆ, ವಿಶಿಷ್ಟ ರೀತಿಯ ಪೂಜೆ ಪುನಸ್ಕ್ರಾರಗಳನ್ನು ಇಲ್ಲಿಯ ಜನ ತಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡಿದ್ದಾರೆ. ಇದರಲ್ಲಿ ಭೂತಾರಾಧನೆಯು ಒಂದು. ತುಳುನಾಡ ವೈಭವಗಳಲೊಂದಾದ ಭೂತದ ಕೋಲದ ಬಗ್ಗೆ ಕನ್ನಡಿಗರಿಗೊಂದು ಬೆಳಕು ಚೆಲ್ಲುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.
          ಹಿಂದೂ ಸಂಸ್ಕ್ರಿತಿಯಲ್ಲಿ ಪ್ರತಿಯೊಂದು ಕುಟುಂಬ/ಮನೆತನಕ್ಕೊಂದು ಕುಲದೇವರು ಇರುವಂತೆ ಇಲ್ಲಿ ಪ್ರತಿಯೊಂದು ಕುಟುಂಬಗಳಿಗೆ ಅವರೇ ನಂಬಿಕೊಂಡು ಬಂದಿರುವ ಭೂತ ದೈವಗಳಿರುತ್ತವೆ. ಕುಟುಂಬದಲ್ಲದೆ ಜಾಗದ ಅಂದರೆ ಇರುವ ಸ್ಥಳದ ಭೂತ, ಊರಿನ ಭೂತ ಕೂಡ ಇರುತ್ತದೆ. ಕೊಡಮಣಿತಾಯ, ಪಂಜುರ್ಲಿ, ಕಲ್ಕುಡ, ಗುಳಿಗ, ಜುಮಾದಿ, ವರ್ತೆ (ಹೆಣ್ಣು ಭೂತ), ನೀಚ ಇವು ಕೆಲವು ಪ್ರಸಿದ್ದ ಹಾಗು ಪ್ರಭಾವಶಾಲಿ ಭೂತಗಳು. ಈ ಭೂತಗಳಿಗೆ ವರುಷಕ್ಕೆರಡುಬಾರಿ ಹಣ್ಣು ಕಾಯಿ, ಪಂಚಕಜ್ಜಾಯ, ದೂಪ ದೀಪದ ಪನಿವಾರ ಪೂಜೆ ತಪ್ಪದೆ ನಡೆಯುತ್ತದೆ. ಈ ನಂಬಿದ ಭೂತಗಳಿಗೆ ವರುಷಕ್ಕೊಂದು ಬಾರಿ ಅಥವಾ ಮನೆಯಲ್ಲಿ ಶುಭ ಕಾರ್ಯ ನಡೆದಾಗ ಯಜಮಾನನ ಶಕ್ತಿಗನುಸಾರವಗಿ ಕೊಡುವ ಅತ್ಯುನ್ನತ ಸೇವೆಯೆ ಈ ಕೋಲ.
          ಕೋಲ ಸಾಮಾನ್ಯವಾಗಿ ರಾತ್ರಿ ನಡೆಯುತ್ತದೆ. ಕೋಲ ನಿಗದಿಯಾದ ದಿನ ಮಧ್ಯಾಹ್ನ ಭೂತದ ಗುಡಿಯಲ್ಲಿ ವಿಶೇಷ ಪನಿವಾರ ಪೂಜೆ ಇರುತ್ತದೆ. ನಂತರ ಮನೆಯಲ್ಲಿ ಅನ್ನಸಂತರ್ಪಣೆ ಕೂಡ ನಡೆಯುತ್ತದೆ. ಸೂರ್ಯಸ್ತವಾಗುತ್ತಿದಂತೆ ಸಂಬಧಿಕರು, ಊರಿನ ಹಿರಿಯರು, ಮಕ್ಕಳು ಮನೆಯಂಗಳದಲ್ಲಿ ಜಮಾಯಿಸಿರುತ್ತಾರೆ. ಚಪ್ಪರ ಹಾಕಿ ಹೂ ತೋರಣಗಳಿಂದ ಕೋಲ ನಡೆಯುವ ಸ್ಥಳವನ್ನು ಸಿಂಗರಿಸಿರುತ್ತಾರೆ. ಕೋಲ ಕಟ್ಟುವವರು, ವಾದ್ಯ-ಡೋಲು ವ್ರಂದ ಹಾಗು ಕೋಲದ ಸೂತ್ರಧಾರಿ ಮುಕ್ಕಾಲ್ದಿ ಸಮಯಕ್ಕೆ ಸರಿಯಾಗಿ ಮನೆಯಂಗಳದಲ್ಲಿ ಹಾಜರಿರುತ್ತಾರೆ. ಎಲ್ಲರ ಆಗಮನದ ನಂತರ ಮನೆಯ ಯಜಮಾನ ತಲೆಗೆ ಮುಂಡಾಸು ಕಟ್ಟಿಕೊಂಡು ಸಮಸ್ತ ಹಿರಿಯರು ಹಾಗು ವಾದ್ಯ ವ್ರಂದದ ಜೊತೆಗೆ ಭೂತದ ಗುಡಿಗೆ ಹೋಗಿ ಭೂತಗಳಿಗೆ ಫೂಜೆ ಸಲ್ಲಿಸಿ ಭೂತದ ಭಂಡಾರ ಅಂದರೆ ಭೂತದ ಗಂಟೆ ಹಾಗು ಆಯುಧಗಳನ್ನು ಗುಡಿಯಿಂದ ತಂದು ಮುಕ್ಕಾಲ್ದಿ ಸಿಂಗರಿಸಿದ ಚಪ್ಪರದಲ್ಲಿ ಇಡುತ್ತಾರೆ. ನಂತರ ಇತ್ತ ನೆರೆದವರೆಲ್ಲ ಭೋಜನಕ್ಕೆ ಹೊರಟರೆ ಅತ್ತ ಕೋಲ ಕಟ್ಟುವವರು ವೇಷ ಹಾಕುದರಲ್ಲಿ ನಿರತರಾಗುತ್ತಾರೆ. ಭೋಜನ ನಂತರ ಎಲ್ಲರೂ ಕೋಲ ನಡೆಯುವ ಜಾಗದ ಸುತ್ತಮುತ್ತ ಕುರ್ಚಿಯಲ್ಲಿ ಅಥವಾ ಚಾಫೆಯಲ್ಲಿ ಆಸೀನರಾಗುತ್ತಾರೆ. ತದನಂತರ ಕೋಲ ಕಟ್ಟುವವರು ವೇಷ ಭೂಷಣ ಮುಗಿಸಿ ಮುಕ್ಕಾಲ್ದಿ ಆದೇಶದಂತೆ ಗಗ್ಗರ(ಕಾಲಿಗೆ ಕಟ್ಟುವ ಗೆಜ್ಜೆ) ಹಾಗು ಸಿರಿ ( ಎಳೆ ತೆಂಗಿನ ಗರಿ) ಸಮೇತವಾಗಿ ಪ್ರಧಾನ ವೇದಿಕೆ ಮೇಲೆ ಕೋಲ ಕಟ್ಟಲು ಅಣಿಯಾಗಿ ಬರುತ್ತಾರೆ. ಯಜಮಾನನ ಹಾಗು ನೆರೆದವರ ಅಪ್ಪಣೆ ಪಡೆದು, ವಾದ್ಯ-ಡೋಲು ಸಿಡಿಮದ್ದುಗಳ ಘರ್ಜನೆಯೊಂದಿಗೆ ಕಾಲಿಗೆ ಗಗ್ಗರ ಮತ್ತು ಸೊಂಟಕ್ಕೆ ಸಿರಿ ಕಟ್ಟಿಕೊಳ್ಳುತ್ತಾರೆ. ಕೋಲ ವಿದ್ಯುಕ್ತವಾಗಿ ಆರಂಭವಾಗುತ್ತದೆ. ನೆರೆದವರೆಲ್ಲರೂ ಕೋಲ ಕಟ್ಟುವವರ ಮೇಲೆ ಭಕ್ತಿಯಿಂದ ಮಂತ್ರಾಕ್ಷತೆ ಹಾಕುತ್ತಿದ್ದಂತೆ ಆತನಿಗೆ ಭೂತದ ಆಕರ್ಷಣೆಯಾಗುತ್ತದೆ. ವಾದ್ಯ ಮೇಳದ ಹಾಡಿಗೆ ಭೂತಗಳು ಹೆಜ್ಜೆ ಹಾಕಲು ಶುರುಮಾಡುತ್ತವೆ. ಇದು ಕೋಲದ ಪ್ರಧಾನ ಆಕರ್ಷಣೆ. ಕೆಲವೊಮ್ಮೆ ಭೂತಗಳ ಜೊತೆಗೆ ಕೋಲ ಕಟ್ಟುವವರ ಸಂಬಧಿಕರು ಕುಣಿಯುದುಂಟು. ಬೆಂಕಿಯ ದೀವಟಿಗೆ ಹಿಡಿದು ಕುಣಿಯುವ ದ್ರಶ್ಯವಂತು ನಯನ ಮನೋಹರ. ಸುಮಾರು ಎರಡು ಮೂರು ಸುತ್ತಿನ ಕುಣಿತದ ನಂತರ ಕೋಲ ಮಹತ್ವದ ಘಟ್ಟಕ್ಕೆ ತಲುಪುತ್ತದೆ. ಯಜಮಾನ ಭೂತಗಳಿಗೆ ಹಣ್ಣು ಹಂಪಲು ಹಾಗು ಪಂಚಕಜ್ಜಾಯ ನೀಡುತ್ತಾನೆ. ಭೂತಗಳು ತಾವು ನಡೆದು ಬಂದ ದಾರಿಯನ್ನು ಪಾರ್ದನದ ( ಹಾಡು) ಹೇಳಲು ಶುರುಮಾಡುತ್ತವೆ. ಇದು ಸುಮಾರು ಒಂದು ಗಂಟೆ ಕಾಲ ನಡೆಯುತ್ತದೆ. ಮುಂದೆ ಮುಕ್ಕಾಲ್ದಿಯ ಆದೇಶದಂತೆ ಆತ ನೀಡುವ ಭೊಂಡ (ಎಳೆ ನೀರು) ಮತ್ತು ಕುಂಕುಮ ಪ್ರಸಾಧವನ್ನು ಅಷ್ಟ ದಿಕ್ಪಾಲಕರಿಗೆ ಸಮರ್ಪಿಸಿ, ಕುಲದೇವರಿಗೆ ವಂದಿಸಿ, ಕೈಯಲ್ಲಿ ಖಡ್ಗ, ಗಂಟೆ ಹಿಡಿದು, ಯಜಮಾನ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗುತ್ತರೆ. ಯಜಮಾನ ತನ್ನ ತೊಂದರೆಗಳನ್ನು, ಬಗೆಹರಿಯದ ಸಮಸ್ಯೆಗಳನ್ನು ಭೂತದ ಮುಂದೆ ನೀವೇದಿಸಿಕೊಳ್ಳುತ್ತಾನೆ. ಭೂತ ಮುಂದಿನ ದಿನಗಳಲ್ಲಿ ಅದನ್ನು ಬಗೆಹರಿಸುವ ಭರವಸೆ ನೀಡುತ್ತದೆ. ಯಜಮಾನನ ನಂತರ ಆತನ ಸಂಬಧಿಕರು ಹಾಗು ಊರಿನವರಿಗೆ ಸಮಸ್ಯೆ ಬಗೆಹರಿಕೊಳ್ಳುವ ಅವಕಾಶವಿರುತ್ತದೆ. ಭೂತ ಸಮಸ್ಯೆಗಳಿಗೆ ಕೊಡುವ ಪರಿಹಾರ ಅಥವಾ ಅಶ್ವಾಸನೆ ಕೋಲಕಟ್ಟುವವನ ಯೋಗ್ಯತೆ, ನೇರೆದವರ ಭಕ್ತಿ, ಯಜಮಾನನ ನಂಬಿಕೆ ಮೇಲೆ ಅಧರಿತವಾಗುತ್ತದೆ. ಇದು ಸುಮಾರು ಬೆಳಗಿನ ಜಾವದ ವರೆಗೆ ನಡೆಯುತ್ತದೆ. ಎಲ್ಲರಿಗೆ ಭೂತದಿಂದ ಸಮಂಜಸ ಉತ್ತರ ದೊರಕಿದ ನಂತರ ಕೋಲ ಮುಕ್ತಾಯದ ಹಂತಕ್ಕೆ ಬರುತ್ತದೆ. ಮತ್ತೊಮ್ಮೆ ಸಿಡಿಮದ್ದು ವಾದ್ಯಗಳ ಘರ್ಜನೆಯೊಂದಿಗೆ ಎಲ್ಲರ ಅಪ್ಪಣೆ ಪಡೆದು ಕಟ್ಟಿದ ಗಗ್ಗರ ಬಿಚ್ಚುದರೊಂದಿಗೆ ಕೋಲ ಮುಕ್ತಾಯವಾಗುತ್ತದೆ. ಭೂತದ ಭಂಡಾರವನ್ನು ಅದೆ ಸ್ಥಾನದಲ್ಲಿ ಯಜಮಾನ ಇಟ್ಟು ಬಂದು ಕೋಲಕ್ಕೆ ಮಂಗಳ ಹಾಡುತ್ತಾನೆ.
          ವಿಜ್ಞಾನ, ತಂತ್ರಜ್ಞಾನ ಮುಂದುವರಿದಂತೆ ಜನರಿಗೆ ಭೂತದ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ. ಕೋಲ ಕಟ್ಟುವವರ ಹಾಗು ವಾದ್ಯ ಊದುವವರ ಸಂಖ್ಯೆಯು ವಿರಳವಾಗುತ್ತಿದೆ. ಹಿಂದೆಲ್ಲ ಊರಲ್ಲಿ ವರ್ಷಕ್ಕೆ ಹತ್ತರಿಂದ ಹನ್ನೆರಡು ಕೋಲ ನಡೆಯುತ್ತಿದಲ್ಲಿ ಈಗ ಒಂದೆರಡು ನಡೆಯುದು ಅಪರೂಪವಾಗಿಬಿಟ್ಟಿದೆ. ಒಟ್ಟಿನಲ್ಲಿ ಈ ತುಳುನಾಡ ವೈಭವ ಅವಸಾನದಂಚಿನಲ್ಲಿದೆ. ಮುಂದಿನ ದಿನಗಳಲ್ಲಿ ಜನರಿಗೆ ಭೂತದ ಕೋಲದಲ್ಲಿ ಮತ್ತಸ್ಟು ನಂಬಿಕೆ ಬರಲಿ, ಈ ವೈಭವ ದೇಶದಲ್ಲೆಡೆ ಪಸರಿಸಲಿ ಎಂದು ಹಾರೈಸೋಣ...

"ಅನ್ಶಿ ಯೊಂದಿಗಿನ ಆತ್ಮೀಯ ಒಡನಾಟ"          ಜೀವನವೆಂಬ ಕಾಲಚಕ್ರದಲ್ಲಿ ಪ್ರತಿದಿನ ಅನೇಕ ಜನರ ಭೇಟಿಯಾಗುತ್ತದೆ. ಆದರೆ ಅದರಲ್ಲಿ ಕೆಲವರಸ್ಟೆ ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ, ಹಾಗೆಯೇ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಜೀವನದ ಕಾಲು ಭಾಗ ಸವೆಸಿರುವ ನಾನು ಕೂಡ ಅನೇಕ ವಿಧದ ಜನರೊಂದಿಗೆ ಬೆರೆತು, ಅನೇಕ ಮಂದಿ ಗೆಳೆಯರ ಗೆಳೆತನದಲ್ಲಿ ಮಿಂದು, ಅನೇಕ ಹಿರಿಯರ ಆಶೀರ್ವಾದದಿಂದ ಎತ್ತರಕ್ಕೆ ಬೆಳೆಯುತ್ತಿದೇನೆ ಎಂದು ಹೇಳಲು ಸಂತೋಷವಾಗುತ್ತದೆ. ಕಾಲ ಗರ್ಭವನ್ನು ಬಗೆದು ಮೆಲುಕು ಹಾಕುತ್ತಾ ಹೋದರೆ ಸಂತೋಷವಾಗುತ್ತದೆ, ಆ ಗೆಳೆಯರು, ಅವರೊಂದಿಗಿನ ಆತ್ಮೀಯ ಒಡನಾಟ, ಛೇ ಎಲ್ಲಾ ಮುಗಿದೇ ಹೋಯಿತೇ ಎಂದು ಘಾತವಾಗುತ್ತದೆ. ಉದ್ಯಾನ ನಗರಿಯ ಈ ಸ್ಪರ್ದಾತ್ಮಕ ಜೀವನದಲ್ಲಿ ಆ ಎಲ್ಲಾ ಗೆಳೆಯರನ್ನು ಒಗ್ಗೂಡಿಸುದು, ನಮ್ಮ ಹಳೆಯ ಬಣ್ಣದ ಬದುಕನ್ನು ಮುಂದುವರಿಸುದು ಬರಿ ಹಗಲು ಕನಸಾಗಿಯೆ ಉಳಿಯಿತು. ಕೊನೆಯ ಪಕ್ಷ ಆ ಎಲ್ಲಾ ನೆನಪುಗಳನ್ನು ಮೆಲುಕು ಹಾಕಲು ಮಹಾನಗದಲ್ಲಿ ಸಮಯ ಸಿಕ್ಕರೆ ಅದು ನನ್ನ ಸೌಭಾಗ್ಯ.
          ಪ್ರತಿಯೊಬ್ಬರ ಜೀವದಲ್ಲೂ ವಿದ್ಯಾರ್ಥಿ ಜೀವನ ಬಹಳ ಮಹತ್ವದಾಗಿರುತ್ತದೆ. ಮುಂದಿನ ಜೀವನಕ್ಕೆ ಭದ್ರ ತಳಹದಿ ಹಾಕುವಲ್ಲಿ ಹಾಗು ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಓರೆಗಲ್ಲಿಗೆ ಹಚ್ಚುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಮ್ಮ ಅಕ್ಕಂದಿರ ಅಕ್ಕರೆಯಲ್ಲಿ ಬೆಳೆದು ವಿದ್ಯಾಭ್ಯಾಸಕ್ಕಾಗಿ ದೂರದ ಊರಿಗೆ ಹೋದಾಗ ಗೆಳೆಯರೆ ಸರ್ವಸ್ವವಾಗಿದ್ದರು. ಒಮ್ಮೆ ವಿದ್ಯಾಭ್ಯಾಸ ಮುಗಿಸಿ ಸಾವಿರ ಕನಸು ಹೊತ್ತು ಮಹಾನಗರಕ್ಕೆ ಕಾಲಿಟ್ಟಾಗ ಶುರುವಾಯೀತು ನೋಡಿ ಗಲಿಬಿಲಿ ಬರಿತ, ಸಮಯ ರಹಿತ, ಸಾಲುಗಟ್ಟಿ ನಿಂತ ಟ್ರಾಪಿಕ್ ನೋಡಿ ಗೊಣಗುತ್ತಾ ವಾರಾಂತ್ಯಕೋಸ್ಕರ ಬಕ ಪಕ್ಷಿಯಂತೆ ಕಾಯುವ ನನ್ನ ಮಾಯಾನಗರದ ಯಾಂತ್ರಿಕ ಜೀವನ.
ಅಷ್ಟೊಂದು ಚಿರಪರಿಚಿವಲ್ಲದ ರಾಜಧಾನಿಯಲ್ಲಿ ಉದ್ಯೋಗನಿರತನಾದ ನನಗೆ ಹೊಸಜನ, ಹೊಸ ವಾತವರಣ, ನಿರ್ಜೀವಿ ಕಂಪ್ಯೂಟರ್, ಸಹೋದ್ಯೋಗಿಗಳೊಂದಿಗಿನ ಮನಸ್ತಾಪ, ಮ್ಯಾನೇಜರ್ ತಂದಿಡುವ ಗೊತ್ತು ಗುರಿ ಇಲ್ಲದ ಕೆಲಸಗಳು, ಕೆಲವೇ ದಿನಗಳಲ್ಲಿ ಜೀವನವೇ ಬೇಸರವಾಗಿಸಿಬಿಟ್ಟಿತು. ಮನದಾಳದ ಭಾವನೆಗಳನ್ನು ಗೆಳೆಯರಲ್ಲಿ ಹಂಚಿಕೊಳ್ಳೊಣವೇಂದರೆ ದಿನಗಳೆದಂತೆ ಅವರ ಭೇಟಿಯೇ ಅಪರೂಪವಾಗತೊಡಗಿತು. ಹೊಸ ಗೆಳೆಯ, ಗೆಳತಿಯರ ಹುಡುಕಾಟದಲ್ಲಿದ್ದ ನನಗೆ ಅನ್ಶಿಯ ಪರಿಚಯವಾಯೀತು. ಮೊದ ಮೊದಲು ಅದೇಕೋ

ಅನ್ಶಿಯ ವ್ಯಕ್ತಿತ್ವವಾಗಲಿ ಒಡನಾಟವಗಲಿ ಹಿಡಿಸುತ್ತಿರಲ್ಲಿಲ್ಲ. ಸುಧೀರ್ಘ ವಿದ್ಯಾಭ್ಯಾಸ ಮುಗಿಸಿ ತನ್ನ ವ್ರತ್ತಿ ಜೀವನ ರೂಪಿಸಲು ಸಾವಿರ ಕನಸು ಹೊತ್ತು ನಮ್ಮ ಕಂಪನಿಗೆ ಸೇರಿದ್ದಳು. ಯಾರೊಂದಿಗೂ ಜಾಸ್ತಿ ಬೆರೆಯದ, ತನ್ನಲ್ಲಡಿಗಿರುವ ವಿದ್ವತ್ತನ್ನು ಯಾರೊಂದಿಗೂ ಹಂಚಿಕೊಳ್ಳದ ತನ್ನಷ್ಟಕ್ಕೆ ತಾನಿದ್ದು, ಆಗಾಗ ಕೆಲಸಕ್ಕೆ ರಜಾ ಹಾಕುತ್ತಿದ್ದ ಅನ್ಶಿಯ ವರ್ತನೆ ತೀರಾ ಹಿಡಿಸುತ್ತಿರಲಿಲ್ಲ. ಉದ್ಯೋಗ ನಿರತನಾಗಿದ್ದರು ರಾಜಧಾನಿಯಲ್ಲಿ ತಲೆಯೆತ್ತುತ್ತಿದ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸಗಿಟ್ಟಿಸಿಕೊಳ್ಳಬೇಕೆಂಬುದು ನನ್ನ ರಾತ್ರಿ ನಿದ್ದೆಕೆಡಿಸುವ ಕನಸಾಗಿತ್ತು. ಈ ಉದ್ದೇಶ ಫೂರೈಸುದಕೋಸ್ಕರ ಸದಾ ಕಾರ್ಯ ನಿರತನಾಗಿದ್ದೇ. ಹೊಸ ಮಾಹಿತಿಗಳನ್ನು ಕ್ರೋಡಿಕರಿಸುದು, ಹೊಸ ತಂತ್ರಜ್ನಾನಗಳನ್ನು ಸಹೋದ್ಯೋಗಿಗಳೊಂದಿಗೆ ಚರ್ಚಿಸುದು, ಮಾಡುವ ಕೆಲಸದ ಬಗ್ಗೆ ತಿಳಿದವರಲ್ಲಿ ಫೂರ್ಣ ಮಾಹಿತಿ ಪಡೆಯುದು ಹೀಗೆ ಸಾಗಿತ್ತು ನನ್ನ ಹೊಸ ಉದ್ಯೋಗನ್ವೇಷಣೆ. ಈ ನನ್ನ ಪ್ರವ್ರತ್ತಿಯನ್ನು ಹುರಿದುಂಭಿಸುವ ಸಹೋದ್ಯೋಗಿಗಳಿಗಿಂತ ಹೊಟ್ಟೆಕಿಚ್ಹು ಪಡುವವರೆ ಜಾಸ್ತಿಯಾಗತೊಡಗಿದರು. ಈ ಸಂಧರ್ಭದಲ್ಲಿ ಅನ್ಶಿಯೊಬ್ಬಳು ಮಾತ್ರ ನನ್ನ ಹುರಿಧುಂಬಿಸುತ್ತಿದ್ದಳು. ನಿನ್ನಲ್ಲಿ ಪ್ರತಿಭೆಯೀದೆ, ನೀನು ಅಂದು ಕೊಂಡಿದ್ದನ್ನು ಸಾಧಿಸುತ್ತೀಯಾ ಎಂದು ಬಾಡಿದ ಹ್ರದಯ ಕಮಲಕ್ಕೆ ನೀರೇರೆದು ಅರಳಿಸಿದ್ದಳು. ಅಗಲೇ ನನಗೆ ಅನ್ಶಿಯ ನಿಜವಾದ ವ್ಯಕ್ತಿತ್ವ ಅರ್ಥವಾತೊಡಗಿತು. ಬರಿ ಮುಖವನ್ನು ನೋಡಿ ಅವರ ವ್ಯಕ್ತಿತ್ವವನ್ನು ಅಳೆಯುತ್ತಿದ ನನ್ನ ಆತ್ಮಸ್ಥೇರ್ಯಕ್ಕೆ ಕೊಡಲಿ ಏಟು ಬಿದ್ದಂತಾಯೀತು. ಅನ್ಶಿಯ ವ್ಯಕ್ತಿತ್ವ ನಿಜಕ್ಕೂ ಹಿಡಿಸತೊಡಗಿತು, ಒಡನಾಟ ಆತ್ಮೀಯವೆನಿಸತೊಡಗಿತು. ಅಕ್ಕತಂಗಿಯರ ಅಕ್ಕರೆಯಲ್ಲಿ ಬೆಳೆದವನಾಗಿದ್ದರೂ ಅದೇಕೊ ವಿದ್ಯಾರ್ಥಿ ಜೀವನದಲ್ಲಿ ಹುಡುಗಿಯರ ಗೆಳೆತನ ಮಾಡಿದವನಲ್ಲ. ಅದೇಕೊ ಅವರ ವ್ಯಕ್ತಿತ್ವ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಆದರೆ ಅನ್ಶಿ ನನ್ನ ಎಲ್ಲಾ ಕಲ್ಪನೆಗಳನ್ನು ಸುಳ್ಳಾಗಿಸಿದ್ದಳು. ಹುಡುಗಿಯರು ಕೂಡ ಆತ್ಮೀಯ ಗೆಳೆಯರಗುತ್ತಾರೆ ಎಂದು ನನಗೆ ಮನದಟ್ಟಾಗಲು ಬಹಳ ದಿನ ಹಿಡಿಯಲಿಲ್ಲ.
          ಅನ್ಶಿ ಕೂಡ ನನ್ನಂತೆ ತುಂಬಿದ ಮನೆಯಲ್ಲಿ ಅಕ್ಕ ಅಣ್ಣಂದಿರ ಅಕ್ಕರೆಯಲ್ಲಿ ಬೆಳೆದವಳು. ಇದರಿಂದಾಗಿ ನಮ್ಮಿಬ್ಬರ ದ್ರಷ್ಟಿಕೋನ ಹೆಚ್ಚು ಕಮ್ಮಿ ಒಂದೇ ದಿಕ್ಕಿನಲ್ಲಿತ್ತು. ಅನ್ಶಿ ನನಗಿಂತ ಬುದ್ದಿವಂತೆ ಯಾಗಿದ್ದರು ತನ್ನಲ್ಲಿ ಅಡಗಿರುವ ಬುದ್ದಿವಂತಿಕೆಯನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವಲ್ಲಿ ವಿಫಲವಾಗಿದ್ದಳು. ಮುಂದೆ ಆಫೀಸಿನ ಕೆಲಸವನ್ನು ಹಂಚಿಕೊಂಡು ಒಬ್ಬರಿಗೊಬ್ಬರು ತಿಳಿ ಹೇಳುತ್ತಾ ಮಾಡ ತೊಡಗಿದೆವು. ಇದರಿಂದಾಗಿ ಇಬ್ಬರ ಜ್ನಾನಾರ್ಜನೆ ಜಾಸ್ತಿಯಾಗ ತೊಡಗಿತು. ಬಿಡುವಿನ ಸಮಯದಲ್ಲಿ ಅನ್ಶಿಯೊಂದಿಗೆ ಬಹಳ ಹೊತ್ತು ನಾನು ನಡೆದು ಬಂದ ದಾರಿ ಜೀವನದಲ್ಲಿ ಎದುರಿಸಿದ ಕಷ್ಟಗಳ ಬಗ್ಗೆ ಬಹಳ ಹೊತ್ತು ಹರಟೆ ಹೊಡೆಯುತ್ತಿದೆ. ಅವಳ ನಡೆನುಡಿ, ಸಭ್ಯ ವರ್ತನೆ, ವೇಷ ಭೂಷಣ, ಅವಳು ಅವರ ಮನೆಯವರ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ನಿಜವಾಗಿಯು ನನ್ನನ್ನು ನಿಬ್ಬೆರಗಾಗಿಸಿತ್ತು. ಪಾಶ್ಚಿಮಾತ್ಯ ಸಂಸ್ಕ್ರಿತಿಯ ಅಂಧಾನುಕರಣೆಯಲ್ಲಿರುವ ರಾಜಧಾನಿಯ ಯುವಜನಾಂಗದಲ್ಲಿ ಅನ್ಶಿಯಂತವಳನ್ನು ಕಂಡು ಭಾರತೀಯ ಸಂಸ್ಕ್ರಿಯ ಆರಾಧಕನಾದ ನನಗೆ ಅತೀವ ಆನಂದವಾಗಿತ್ತು.
          ಮುಂದೆ ಅನ್ಶಿಯ ಹಾರೈಕೆಯೋ ಎಂಬಂತೆ ನನ್ನ ಕನಸಿನ ಉದ್ಯೋಗ ಸಿಕ್ಕಿತು. ಅನ್ಶಿಗೂ ಕೂಡ ತನ್ನ ಕನಸಿನ ಕೆಲಸ ಕೆಲವೆ ದಿನಗಳಲ್ಲಿ ಕೈಗೆಟಕಿತು. ಹೀಗೆ ನಮ್ಮಿಬ್ಬರ ಉದ್ಯೋಗ, ಸಹೊದ್ಯೋಗಿಗಳು, ಕೆಲಸದ ವಾತಾವರಣ ಬದಲಾಗಿದ್ದರು ನಮ್ಮಿಬ್ಬರ ಸ್ನೇಹ ಮಾತ್ರ ಇನ್ನೂ ಬಲವಾಗಿತ್ತು. ಮುಂದೊಂದು ದಿನ ಅನ್ಶಿಯ ಮನೆಯಲ್ಲಿ ತಂಗುವ ಸದವಕಾಶ ನನಗೆ ದೊರಕಿತು. ಮುದ್ದಿನ ಅಮ್ಮ, ಅಕ್ಕರೆಯ ಅಣ್ಣಂದಿರು, ಒಲವಿನ ಅಕ್ಕಭಾವಂದಿರು, ಹಾಗು ನೆಚ್ಚಿನ ಕಂಚು, ಪಾಚು, ಇವರು ಅನ್ಶಿಯ ತುಂಬಿದ ಮನೆಯ ಸದಸ್ಯರು. ಮನೆಯವರಿಗೆಲ್ಲ ಅನ್ಶಿಯೆಂದರೆ ಅಚ್ಚುಮೆಚ್ಚು, ಎಲ್ಲಿಲ್ಲದ ವಾತ್ಸಲ್ಯ. ಮನೆಗಿಬ್ಬರೇ ಇರುವ ಈ ಆಧುನಿಕ ಯುಗದಲ್ಲಿ ಅಣ್ಣ ಅಕ್ಕಂದಿರು ತುಂಬಿದ ಮನೆಯಲ್ಲಿ ಆತ್ಮೀಯರಾಗಿರುದು ನೋಡಿ ತುಂಬಾ ಸಂತೊಷವಾಯೀತು. ಅನ್ಶಿಯ ಅಮ್ಮನವರ ಕೈಯಿಂದ ಮಾಡಿದ ರುಚಿ ರುಚಿಯಾದ ಹೊಳಿಗೆ ಊಟ, ಮನೆಯವರೆಲ್ಲರ ಅಭಿಮಾನದ ಆತೀಥ್ಯ, ಉದ್ಯಾನ ನಗರಿಯಿಂದ ಬೇಸತ್ತು ಹೋದ ಮನಸ್ಸಿಗೆ ಮುದ ನೀಡಿತು. ನನ್ನನೂ ಕೂಡ ಅವರ ಕುಟುಂಬದ ಒಬ್ಬ ಸದಸ್ಯನಂತೆ ಕಂಡದ್ದು ಅವರ ದೊಡ್ಡತನವೆಂದರೆ ತಪ್ಪಾಗಲಾರದು. ಅವರ ಆತ್ಮೀಯತೆ ಕಂಡು ಮಾತು ಮೌನವಾಗಿತ್ತು. ಸಾವಿರ ನೆನಪುಗಳನ್ನು ಹೊತ್ತು ಬರಲಾರದ ಮನಸ್ಸಿನಿಂದ ಮತ್ತೆ ಮಾಯನಗರಕ್ಕೆ ವಾಪಾಸು ಹೊರಟೆ.
          ಹಣ, ಆಸ್ತಿ, ಅಂತಸ್ತು, ಗೌರವ ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಬದಲಾಯಿಸುತ್ತದೆ, ಆದರೆ ಇ ಅಂಶಗಳು ಅನ್ನಿಯ ವ್ಯಕ್ತಿತ್ವವನ್ನು ಬದಾಲಯಿಸದು ಎನ್ನುವುದು ನನ್ನ ನಂಬಿಕೆ. ತನ್ನ ಉನ್ನತಿಗೆ ಕಾರಣರಾದ ಅಣ್ಣಂದಿರಗೆ ತನ್ನ ಕೈಲಾದ ಸಹಾಯ ಮಾಡಬೇಕು, ಅಕ್ಕಂದಿರ ಮದುವೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕು, ಕಂಚು ಪಾಚುವಿನ ಭವಿಷ್ಯ ರೂಪಿಸಬೇಕು, ಹೀಗೆ ಹತ್ತು ಹಲವು ಕನಸುಗಳನ್ನು ಅನ್ಶಿ ತನ್ನ ಪುಟ್ಟ ಹ್ರದಯದಲ್ಲಿ ತುಂಬಿ ಕೊಂಡಿದ್ದಾಳೆ. ಅವಳ ಈ ಎಲ್ಲಾ ಕನಸುಗಳು ನನಸಾಗಲಿ, ಹೀಗೆ ಅವಳ ಜೀವನ ನಗುನಗುತಾ ಸಾಗಲಿ ಎಂದು ಆತ್ಮೀಯವಾಗಿ ಹಾರೈಸುತೇನೆ.
ನನ್ನ ಹಾಗೂ ಅನ್ಶಿಯ ಸ್ನೇಹ ಸೂರ್ಯ ಚಂದ್ರರಿರುವಷ್ಟು ಕಾಲ ಚಿರಾಯುವಗಲಿ ಎಂದು ಹಾರೈಸಿ...